ವಿಸ್ಕಾನ್‍ಸಿನ್

	ಅಮೆರಿಕ ಸಂಯುಕ್ತ ಸಂಸ್ಥಾನದ ಉತ್ತರಭಾಗ ದಲ್ಲಿರುವ ಒಂದು ರಾಜ್ಯ. ವಿಸ್ತೀರ್ಣ 1,45,414 ಚ.ಕಿಮೀ. ರಾಜಧಾನಿ: ಮ್ಯಾಡಿಸನ್. ಜನಸಂಖ್ಯೆ 49,06,745(1990). 

	ಭೂ ಲಕ್ಷಣ: ವಿಸ್ಕಾನ್‍ಸಿನ್ ಭೂ ಸ್ವರೂಪಗಳು ಅನೇಕ ದಶಲಕ್ಷ ವರ್ಷಗಳಿಂದ ನೀರ್ಗಾಲುವೆಗಳಿಂದುಂಟಾದ ಭೂ ಪ್ರದೇಶಗಳಾಗಿವೆ. ಹಿಮನದಿಗಳು ಬೆಟ್ಟಗುಡ್ಡಗಳ ಮೇಲ್ಭಾಗವನ್ನು ಸವೆಸಿ ಸಂಚಯನ ಕಾರ್ಯದಿಂದ ಕಣಿವೆಗಳನ್ನು ಮುಚ್ಚಿವೆ. ಇವು ಅನೇಕ ಸರೋವರಗಳ ಉಗಮಕ್ಕೆ ಕಾರಣವಾಗಿವೆ. ಇಲ್ಲಿ ನೂರಾರು ಜಲಪಾತಗಳು ಹಾಗೂ 15,000ಕ್ಕೂ ಹೆಚ್ಚು ಸರೋವರಗಳು ಕಂಡುಬರುತ್ತವೆ. ಆದರೆ ದಕ್ಷಿಣಭಾಗ ಕಡಿದಾದ ಕಣಿವೆಗಳ ಹಾಗೂ ಉಬ್ಬುತಗ್ಗಾದ ಪ್ರದೇಶಗಳಿಂದ ಕೂಡಿದೆ. ವಿಸ್ಕಾನ್‍ಸಿನ್ ಪ.ರೇ. 860 49† ದಿಂದ 920 54† ಹಾಗೂ ಉ. ಅ 420 30†  ದಿಂದ 470 3†  ವರೆಗೂ ವಿಸ್ತರಿಸಿದೆ. ಉತ್ತರ-ದಕ್ಷಿಣವಾಗಿ 496 ಕಿಮೀ, ಪೂರ್ವ-ಪಶ್ಚಿಮವಾಗಿ 416 ಕಿಮೀ ವಿಸ್ತಾರವಾಗಿದೆ. ಇದು ಉತ್ತರದಲ್ಲಿ ಮಿಷಿಗನ್, ದಕ್ಷಿಣದಲ್ಲಿ ಇಲಿನಾಯ್ಸ್ ಪೂರ್ವದಲ್ಲಿ ಮಿಷಿಗನ್ ಸರೋವರಗಳನ್ನೊಳಗೊಂಡಿದೆ. ವಿಸ್ಕಾನ್‍ಸಿನ್ ಪಶ್ಚಿಮದಲ್ಲಿ ಮಿನಿಸೋಟ ಮತ್ತು ಅಯೋವ ರಾಜ್ಯಗಳನ್ನು, ಈಶಾನ್ಯದಲ್ಲಿ ಮಿಷಿಗನ್ ರಾಜ್ಯವನ್ನು ಎಲ್ಲೆಗಳಾಗಿ ಹೊಂದಿದೆ. ಟಿಮ್ಸ್‍ಹಿಲ್ 1951† ಅಡಿ ಎತ್ತರವಾಗಿದ್ದು ವಿಸ್ಕಾನ್‍ಸಿನ್‍ನ ಅತ್ಯಂತ ಎತ್ತರ ಪ್ರದೇಶವಾಗಿದೆ. ಸಮುದ್ರಮಟ್ಟದಿಂದ 581 ಅಡಿ ಇರುವ ಲೇಕ್ ಮಿಷಿಗನ್ ಅತ್ಯಂತ ತಗ್ಗಾದ ಪ್ರದೇಶ. ವಿಸ್ಕಾನ್‍ಸಿನ್‍ನ ಮುಖ್ಯ ನದಿಗಳೆಂದರೆ ವಿಸ್ಕಾನ್‍ಸಿನ್‍ನದಿ, ಮಿಸಿಸಿಪಿ, ಸೆಂಟ್ ಕ್ರೊಯಿಕ್ಸ್ ಬ್ಲಾಕ್ ನದಿ, ವುಲ್ಫ್ ನದಿ, ಬ್ರೂಲ್. ಮುಖ್ಯ ಸರೋವರಗಳೆಂದರೆ ಲೇಕ್ ಮಿಷಿಗನ್, ಲೇಕ್ ಸುಪೀರಿಯರ್ ಮತ್ತು ಲೇಕ್ ವಿನಿಬ್ಯಾಗೊ.

	ವಿಸ್ಕಾನ್‍ಸಿನ್ ರಾಜ್ಯವನ್ನು ಐದು ಭೌಗೋಳಿಕ ಪ್ರದೇಶಗಳನ್ನಾಗಿ ವಿಭಾಗಿಸಲಾಗಿದೆ: 1. ಸುಪೀರಿಯರ್ ಸರೋವರದ ತಗ್ಗಾದ ಪ್ರದೇಶ 2. ಉತ್ತರದ ಪ್ರಸ್ಥಭೂಮಿ 3. ಮಧ್ಯಮೈದಾನ 4. ಪೂರ್ವದ ಪರ್ವತ ಶ್ರೇಣಿಗಳು ಹಾಗೂ 5. ಪಶ್ಚಿಮದ ಎತ್ತರ ಪ್ರದೇಶ.

	ಉತ್ತರ ವಿಸ್ಕಾನ್‍ಸಿನ್‍ನಲ್ಲಿ ಕಂಡುಬರುವ ಸುಪೀರಿಯರ್ ಸರೋವರ ಪ್ರದೇಶ ತಗ್ಗಾಗಿದ್ದು ಉತ್ತರದಿಂದ ದಕ್ಷಿಣಕ್ಕೆ ಬಂದಂತೆ ಎತ್ತರವಾಗಿದೆ.

	ಉತ್ತರದ ಪ್ರಸ್ಥಭೂಮಿ ಪ್ರದೇಶ ವಿಸ್ಕಾನ್‍ಸಿನ್ ರಾಜ್ಯದ ಉತ್ತರ ಭಾಗದಲ್ಲಿ ಕಂಡುಬರುತ್ತದೆ. ಇದು ಸುಪೀರಿಯರ್ ಸರೋವರದ ತಗ್ಗಾದ ಪ್ರದೇಶದ ದಕ್ಷಿಣ ಭಾಗದಲ್ಲಿ ಕಂಡುಬರುತ್ತದೆ. ರಾಜ್ಯದ 1/3 ಭಾಗ ಭೂ ಪ್ರದೇಶವನ್ನೊಳಗೊಂಡಿದೆ. ಉತ್ತರ ಪ್ರಸ್ಥಭೂಮಿಯು ಉತ್ತರದಲ್ಲಿ ಅತ್ಯಂತ ಎತ್ತರವಾಗಿದ್ದು ದಕ್ಷಿಣಕ್ಕೆ ಬಂದಂತೆ ಇಳಿಜಾರಾಗಿದೆ. ಈ ಪ್ರದೇಶದಲ್ಲಿ ಅನೇಕ ಚಿಕ್ಕಪುಟ್ಟ ಸರೋವರಗಳಿದ್ದು ಬೆಟ್ಟಗುಡ್ಡಗಳಿವೆ. ಟಿಮ್ಸ್ ಪರ್ವತ ಇರುವುದು ಇಲ್ಲಿಯೇ. ಈ ರಾಜ್ಯದಲ್ಲಿ ನೂರಾರು ಜಲಪಾತಗಳಿವೆ. ಅವುಗಳಲ್ಲಿ ಬಿಗ್‍ಮಾನಿಟೊ ಜಲಪಾತ ಅತ್ಯಂತ ಎತ್ತರವಾದುದು (50 ಮೀ).

	ಮಧ್ಯಮೈದಾನ ಪ್ರದೇಶ ರಾಜ್ಯದ ಮಧ್ಯಭಾಗದಲ್ಲಿದೆ. ಮಧ್ಯ ಮೈದಾನದ ದಕ್ಷಿಣಕ್ಕೆ ಹರಿಯುವ ವಿಸ್ಕಾನ್‍ಸಿನ್ ನದಿ ಸುಂದರ ಕಮರಿಗಳನ್ನು ನಿರ್ಮಿಸಿದೆ. ಇದನ್ನು ವಿಸ್ಕಾನ್‍ಸಿನ್ ಡೆಲ್ಫ್ ಎಂದು ಕರೆಯುತ್ತಾರೆ. ಸುಂದರ ಭೂ ಸ್ವರೂಪವನ್ನು ಇಲ್ಲಿ ಕಾಣಬಹುದು.

	ಪೂರ್ವ ಪರ್ವತಶ್ರೇಣಿ ಪ್ರದೇಶ ಮಧ್ಯಮೈದಾನದ ಪೂರ್ವಭಾಗದಲ್ಲಿ ಕಂಡುಬರುತ್ತದೆ. ಇದು ಗ್ರೀಸ್‍ಬೇಯಿಂದ ದಕ್ಷಿಣಕ್ಕೆ ಇಲಿನಾಯ್‍ವರೆಗೂ ವಿಸ್ತರಿಸಿದೆ. ಈ ಪ್ರದೇಶ ಅತ್ಯಂತ ಫಲವತ್ತಾಗಿದ್ದು ವ್ಯವಸಾಯ ಯೋಗ್ಯ ಭೂಮಿಯಾಗಿದೆ. ಇಲ್ಲಿ ಹಿಮನದಿಯ ಕಾರ್ಯಚಟುವಟಿಕೆಗಳಿಂದುಂ ಟಾದ ಸುಣ್ಣಕಲ್ಲಿನ ಗುಡ್ಡಗಳು ಕಂಡುಬರುತ್ತವೆ.

	ಮಧ್ಯಮೈದಾನಕ್ಕೆ ಪಶ್ಚಿಮಕ್ಕಿರುವ ಪ್ರದೇಶವೇ ಪಶ್ಚಿಮದ ಎತ್ತರವಾದ ಪ್ರದೇಶ. ಮಿಸಿಸಿಪಿ ನದಿ ತೀರದಲ್ಲಿ ಕಂಡುಬರುವ ಸುಣ್ಣಕಲ್ಲು ಮತ್ತು ಮರಳುಕಲ್ಲುಗಳಿಂದ ಆವೃತವಾಗಿವೆ. ಇದು ಮಿಸಿಸಿಪಿ ನದಿಯ ತೀರದಿಂದ ಹಿಡಿದು ಇಲಿನಾಯ್ ರಾಜ್ಯದ ಎಲ್ಲೆಯವರೆಗೂ ಆವರಿಸಿದೆ. ಈ ಪ್ರದೇಶದ ನೈಋತ್ಯಭಾಗ ಹಿಮನದಿಯ ಕಾರ್ಯದಿಂದ ಮುಕ್ತವಾಗಿದೆ. ಅಲ್ಲಲ್ಲಿ ಎತ್ತರವಾದ ಬೆಟ್ಟಗುಡ್ಡಗಳು ಕಂಡುಬರುತ್ತವೆ. ವಿಸ್ಕಾನ್‍ಸಿನ್‍ನ ಜನವರಿ ತಿಂಗಳ ಸರಾಸರಿ ಉಷ್ಣಾಂಶ-110 ಸೆ.ಗೂ ಕಡಿಮೆಯಾಗುತ್ತದೆ. ಜುಲೈ ತಿಂಗಳ ಸರಾಸರಿ ಉಷ್ಣಾಂಶ ಕೆಲವೊಮ್ಮೆ-210  ಸೆ. ತಲುಪುತ್ತದೆ.

	1600ರಲ್ಲಿ ಫ್ರೆಂಚರು ವಿಸ್ಕಾನ್‍ಸಿನ್ ಪ್ರದೇಶಕ್ಕೆ ವಲಸೆ ಬಂದಾಗ ವಿನ್ನಿಬಾಗೋ, ಡಕೋಟ ಮತ್ತು ಮಿನೋಮಿನಿ ಪ್ರಾಂತದಲ್ಲಿ ಸ್ಥಳೀಯ ಇಂಡಿಯನ್ನರು ವಾಸವಾಗಿದ್ದರು. ಫ್ರೆಂಚರಿಗೂ ಬ್ರಿಟಿಷರಿಗೂ ಏಳು ವರ್ಷ(1756-63) ನಡೆದ ಯುದ್ಧದಲ್ಲಿ ಈ ಪ್ರಾಂತ ಬ್ರಿಟಿಷರ ವಶವಾಯಿತು. 1783ರಲ್ಲಿ ಅಮೆರಿಕ ಕ್ರಾಂತಿ ಕೊನೆಗೊಂಡ ಅನಂತರ ಇದು ಅಮೆರಿಕ ಸಂಯುಕ್ತ ಸಂಸ್ಥಾನದ ಒಂದು ಭಾಗವಾಯಿತು. 1848 ಮೇ 29ರಂದು ಇದು ಅಮೆರಿಕ ಸಂಯುಕ್ತ ಸಂಸ್ಥಾನದ 30ನೆಯ ಗಣರಾಜ್ಯವಾಯಿತು. ರಾಬರ್ಟ್ ಎಂ.ಲಾ ಪೋಲಿಟಿ 1900ರಲ್ಲಿ ಗವರ್ನರ್ ಆದ ಮೇಲೆ ಅನೇಕ ಪ್ರಗತಿಪರ ಸುಧಾರಣೆಗಳಾದವು.

	1993-97ರ ಅವಧಿಯಲ್ಲಿ ಉಂಟಾದ ಆರ್ಥಿಕ ಮುಗ್ಗಟ್ಟು ದೇಶದ ಆರ್ಥಿಕ ಪರಿಸ್ಥಿತಿಯನ್ನು ತಲ್ಲಣಗೊಳಿಸಿತು. ಇದೇ ಅವಧಿಯಲ್ಲಿ ಪ್ರಾರಂಭವಾದ ಪ್ರಗತಿಪರ ಚಳವಳಿ ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ತಂದಿತು.

	ಇಲ್ಲಿ ಕಂಡುಬರುವ ಮುಖ್ಯ ನಗರಗಳೆಂದರೆ ಮಿಲ್‍ವಾಕಿ, ಮ್ಯಾಡಿಸನ್, ಗ್ರೀನ್‍ಬೇ, ರೇಸಿನ್, ಕಿನೋಷ ಹಾಗೂ ಆಸೆಲ್‍ಟನ್.  ಮಿಲ್‍ವೋಕಿ ರಾಜ್ಯದ ಮುಖ್ಯ ವ್ಯಾಪಾರ ಹಾಗೂ ಹಣಕಾಸಿನ ಕೇಂದ್ರ. ಇಲ್ಲಿ ಬೃಹತ್ ಬ್ಯಾಂಕುಗಳು ಹಾಗೂ ಜೀವವಿಮಾ ಕಂಪನಿಗಳು ಕಂಡುಬರುತ್ತವೆ. ಜನರು ಹೆಚ್ಚಾಗಿ ಸಗಟು ವ್ಯಾಪಾರ ಹಾಗೂ ಇತರ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

	ವಿಸ್ಕಾನ್‍ಸಿನ್‍ನ ಅತ್ಯಂತ ಮುಖ್ಯ ಆರ್ಥಿಕ ಚಟುವಟಿಕೆ ಕೈಗಾರಿಕೆ. ದಕ್ಷಿಣದ ಮಿಲ್‍ವಾಕಿ ಮತ್ತಿತರ ಪಟ್ಟಣಗಳು ಸಿದ್ಧವಸ್ತುಗಳನ್ನು ತಯಾರಿಸುವ ಮುಖ್ಯ ಕೇಂದ್ರಗಳಾಗಿವೆ. ಅವುಗಳಲ್ಲಿ ಮುಖ್ಯವಾಗಿ ಎಂಜಿನಿಯರಿಂಗ್ ಉಪಕರಣಗಳು, ಕಟ್ಟಡ ನಿರ್ಮಾಣ ವಸ್ತುಗಳು ಮುಖ್ಯವಾದವು. ಉಳಿದೆಲ್ಲ ಪ್ರದೇಶಗಳಲ್ಲೂ ಸಾಮಾನ್ಯವಾಗಿ ಹೈನುಗಾರಿಕೆಗೆ ಸಂಬಂಧಪಟ್ಟ ಹಾಗೂ ಆಹಾರ ಸಂರಕ್ಷಣಾ ಘಟಕಗಳನ್ನು ಕಾಣಬಹುದಾಗಿದೆ. ಅದರಲ್ಲೂ ಹೈನುಗಾರಿಕೆ ಹಾಗೂ ಮಾಂಸದ ಪದಾರ್ಥಗಳು ಅತ್ಯಂತ ಮುಖ್ಯವಾಗಿವೆ. ರಾಜ್ಯದ ಕೇಂದ್ರಭಾಗದಲ್ಲಿ ಅನೇಕ ಕಾಗದದ ಕಾರ್ಖಾನೆಗಳು ಕಂಡುಬರುತ್ತವೆ. ಈ ರಾಜ್ಯ ಪ್ರಮುಖ ಹಾಲು ಉತ್ಪಾದನಾ ಕೇಂದ್ರ.

	ಮಿಲ್‍ವಾಕಿಯ ಸಾರ್ವಜನಿಕ ವಸ್ತುಸಂಗ್ರಹಾಲಯ ಅಮೆರಿಕದ ಅತ್ಯಂತ ಶ್ರೇಷ್ಠ ಪ್ರಾಕೃತಿಕ ಇತಿಹಾಸ ವಸ್ತುಸಂಗ್ರಹಾಲಯ. ಈ ರಾಜ್ಯದಲ್ಲಿ 380 ಸಾರ್ವಜನಿಕ ಗ್ರಂಥಾಲಯಗಳಿವೆ. ಇಲ್ಲಿನ ಪ್ರವಾಸಿ ಕೇಂದ್ರಗಳು ಆಕರ್ಷಕವಾಗಿವೆ.
		(ಕೆ.ಆರ್.ಐ.)
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ